ಭಕ್ತ ಧ್ರುವ ಸಿನಿಮಾ ಕನ್ನಡದಲ್ಲಿ ತಯಾರಾದ ಮೊದಲ ವಾಕ್ಚಿತ್ರ. ಅರೇ ! ಸತಿಸುಲೋಚನವಲ್ಲವೇ ? ಎಂದು ಆಲೋಚಿಸಬೇಡಿ. ಸಂದೇಹವಿಲ್ಲದೆ ಕನ್ನಡದಲ್ಲಿ ಬಿಡುಗಡೆಗೊಂಡ ಮೊದಲ ವಾಕ್ಚಿತ್ರ ಸತಿಸುಲೋಚನ (1934 ಮಾರ್ಚ್ 3), ಆದರೆ ಪ್ರಪ್ರಥಮವಾಗಿ ತಯಾರಾದ ವಾಕ್ ಚಿತ್ರ ಭಕ್ತಧ್ರುವ (1934 ಏಪ್ರಿಲ್ 1).
ಪೌರಾಣಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಪಾರ್ಶ್ವನಾಥ ಅಲ್ಬೇಕರ್ ನಿರ್ದೇಶಿಸಿದ್ದಾರೆ. ವಿಷ್ಣು ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ ಬಾಲಕ ಧ್ರುವನ ಕಥೆ ಇದಾಗಿದ್ದು, ಮಾಸ್ಟರ್ ಮುತ್ತು ‘ಧ್ರುವ’ನ ಪಾತ್ರ ನಿರ್ವಹಿಸಿದ್ದರು. ಲಕ್ಷ್ಮೀಬಾಯಿ ಟಿ.ದ್ವಾರಕಾನಾಥ್, ಹೆಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಜಿ. ನಾಗೇಶರಾಯರು, ಎಂ.ಜಿ.ಮರಿರಾವ್, ಟಿ.ಕನಕಲಕ್ಷ್ಮಮ್ಮ, ಟಿ.ಸುನಂದಮ್ಮ, ದೇವುಡು ಅವರೆಲ್ಲಾ ಮುಖ್ಯಭೂಮಿಕೆಯಲ್ಲಿದ್ದರು.
ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ತಯಾರಾದ ಈ 12 ರೀಲುಗಳ (142 ನಿಮಿಷ) ಚಿತ್ರ, ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸೆಲೆಕ್ಟ್ ಸಿನಿಮಾ ಹಾಲ್ ನಲ್ಲಿ ಪ್ರದರ್ಶನ ಕಂಡಿತ್ತು. ಗಮನಾರ್ಹ ಸಂಗತಿಯೆಂದರೆ ಭಕ್ತ ಧ್ರುವ ಚಿತ್ರವನ್ನು ವೀಕ್ಷಿಸಿದ ಕೆಲ ಪ್ರೇಕ್ಷಕರು ಸಿನಿಮಾ ಮಂದಿರದಿಂದಲೇ ಓಡಿಹೋಗಿದ್ದರು. ಕೆಲವು ಮಹಿಳೆಯರಂತೂ ಮೂರ್ಛೆಹೋಗಿದ್ದರು.
ಹೌದು ! ಮೂಕಿ ಚಿತ್ರಗಳ ಜಮಾನ ಕಳೆದು ವಾಕ್ಚಿತ್ರಗಳು ಆರಂಭಗೊಂಡಾಗ ಪ್ರೇಕ್ಷಕರಿಗೂ ಹೊಸ ಲೋಕ ಸೃಷ್ಟಿಯಾದಂತೆ ಭಾಸವಾಗಿತ್ತು. ಭಕ್ತ ಧ್ರುವ ಸಿನಿಮಾದಲ್ಲಿ ‘ಧ್ರುವ’ನ ತಪಸ್ಸಿನ ಸಂದರ್ಭದಲ್ಲಿ ಸಿಂಹದ ಗರ್ಜನೆ ಕೇಳಿ ಬಂದಾಗ ಅನೇಕರು ಚಿತ್ರಮಂದಿರದಿಂದಲೇ ಕಾಲ್ಕಿತ್ತಿದ್ದರು. ನಿಜವಾಗಿಯೂ ಸಿಂಹ ತಮ್ಮ ಬಳಿಗೆ ಬರುತ್ತಿದೆಯೆಂದು ಭಾವಿಸಿ ಮಹಿಳೆಯರೂ ಮೂರ್ಛೆತಪ್ಪಿದ್ದರು. ವಾಕ್ ಚಿತ್ರದ ತಂತ್ರಜ್ಞಾನ ಅಂದು ಜನರನ್ನು ಆಶ್ಚರ್ಯಚಕಿತರಾಗುವಂತೆ ಮಾಡಿದ್ದು ಮಾತ್ರವಲ್ಲದೆ ದಂಗುಬಡಿಸಿತ್ತು ಎಂದು ಈ ಸನ್ನಿವೇಶದಿಂದ ಅರಿಯಬಹುದು.



![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments