
ಖ್ಯಾತ ಸಿನೆಮಾ ನಿರ್ದೇಶಕ, ಅಖಿರಾ ಕುರೋಸಾವಾ ಒಮ್ಮೆ, ನಾನು ಕಲಿತ ಸಿನೆಮಾ ಶಾಲೆ, ಎಫ್.ಟಿ.ಐ.ಐಗೆ ಬಂದಿದ್ದರಂತೆ. (ನಾನು ಅಲ್ಲಿಗೆ ಹೋಗುವ ಸಾಕಷ್ಟು ಮೊದಲಿನ ಕಥೆ ಇದು) ಸಿನೆಮಾ ಶಾಲೆಯ ನಿರ್ದೇಶನ ವಿಭಾಗಕ್ಕೆ ಸಂಭ್ರಮವೋ ಸಂಭ್ರಮ. ಅವರು ಕುರೋಸಾವಾರನ್ನು ಕರೆದುಕೊಂಡು ಸಿನೆಮಾ ಶಾಲೆ ತೋರಿಸಲು ಹೊರಟರೆ ಕುರೋಸಾವಾ, “ನಿಮ್ಮ ಎಡಿಟಿಂಗ್ ವಿಭಾಗ ಎಲ್ಲಿ? ಅದನ್ನು ಮೊದಲು ನೋಡೋಣ” ಅಂದರಂತೆ. ನಿರ್ದೇಶನ ವಿಭಾಗಕ್ಕೆ ಅಚ್ಚರಿ, (ಕೊಂಚ ಅಸೂಯೆಯೂ ಆಗಿರಬಹುದು!) ಚಿತ್ರೀಕರಣ ಸ್ಟೂಡಿಯೋ ಇತ್ಯಾದಿ ಮೊದಲು ನೋಡಬಹುದಲ್ಲಾ? ಎಡಿಟಿಂಗ್ ರೂಮ್ ಯಾಕೆ ಎಂದು ಯಾರೋ ಕೇಳಿದರು. ಅದಕ್ಕೆ ಕುರೋಸಾವಾ ನಕ್ಕು, ಸಿನೆಮಾಗಳು ಕೇವಲ ಎರಡು ಟೇಬಲ್ ಮೇಲೆ ರೂಪ ಪಡೆದುಕೊಳ್ಳುವುದು. ಮೊದಲನೆಯದು ರೈಟಿಂಗ್ ಟೇಬಲ್ (ಅಂದರೆ ಚಿತ್ರಕಥೆ ರಚನೆಯ ಸಂದರ್ಭದಲ್ಲಿ) ಎರಡನೆಯದು ಎಡಿಟಿಂಗ್ ಟೇಬಲ್ ಮೇಲೆ ಎಂದರಂತೆ! ಅವರು ಚಿತ್ರೀಕರಣವನ್ನು ಉಪೇಕ್ಷಿಸಿಲ್ಲ. ಆದರೆ, ಬರವಣಿಗೆ ಹಾಗೂ ಸಂಸ್ಕರಣಕ್ಕೆ ಇರುವ ಮಹತ್ವದ ಕುರಿತಾಗಿ ಹೇಳಿದ್ದರು. (ಇಂದಿನ ಸಂದರ್ಭದಲ್ಲಿ, ಎಡಿಟಿಂಗ್, ಧ್ವನಿ ಸಂಯೋಜನೆ, ವರ್ಣ ಸಂಸ್ಕರಣೆ ಇತ್ಯಾದಿ ಎಲ್ಲವನ್ನೂ ಒಳಗೊಂಡು) ಆದರೆ, ಇಂದು ಸಿನೆಮಾ ಎಂದರೆ ಜನಪ್ರಿಯ ಕಲ್ಪನೆಯಲ್ಲಿ ಚಿತ್ರೀಕರಣವೇ ಆಗಿರುವುದು ವಿಚಿತ್ರ. ಸಿನೆಮಾ ಕ್ಷೇತ್ರಕ್ಕೆ ಬರಲು ಆಶಿಸುವವರು, ಓದುವಿಕೆಯ ಮೂಲಕ, ಸಿನೆಮಾಗಳನ್ನು ನೋಡುವ ಮೂಲಕ ತಮ್ಮ ತಿರುಳನ್ನು ಗಟ್ಟಿಗೊಳಿಸುವ ಕೆಲಸವನ್ನೂ, ಚಿತ್ರವನ್ನು ಕಟ್ಟುವ ತಂತ್ರಗಾರಿಕೆಯನ್ನು ಸಂಕಲನದಿಂದಲೂ ಕಲಿಯುವುದು ಅತ್ಯವಶ್ಯಕ. ಚಿತ್ರೀಕರಣ ಸಿನೆಮಾದ ಮುಖ್ಯ ಅಂಗವೇ ಆಗಿದ್ದರೂ, ಪೂರ್ವ ಸಿದ್ಧತೆ ಇಲ್ಲದೆ, ಚಿತ್ರೀಕರಣಕ್ಕೆ ಇಳಿಯುವುದು, ಕುದುರೆಯೇ ಕಟ್ಟದ ರಥವನ್ನೇರಿ ಯುದ್ಧಕ್ಕೆ ಹೊರಟಂತಾದೀತು ಎಚ್ಚರ!
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments