
೨೦೦೭ರ ಒಂದು ವಿಷಯ ಇದು. ನಾನು ಆಗಷ್ಟೇ ಎಫ್.ಟಿ. ಐ. ಐ ಯಲ್ಲಿ ಓದು ಮುಗಿಸಿ ಬಂದಿದ್ದೆ. ಒಂದು ಡಾಕ್ಯುಮೆಂಟರಿ ಕೆಲಸ ಸಿಕ್ಕಿತ್ತು. ಅದಕ್ಕಾಗಿ ಇಡೀ ದೇಶ ಸುತ್ತುವ ಕೆಲಸ ಇತ್ತು. ನಾನು ಮೊದಲ ಬಾರಿಗೆ ಕಶ್ಮೀರಕ್ಕೆ ಹೋಗಿದ್ದು ಅವಾಗಲೇ. ನಾಲ್ಕು ದಿನ ಕಶ್ಮೀರ ಸುತ್ತಾಡಿ ಒಂದಷ್ಟು ಸಂದರ್ಶನಗಳನ್ನು ಮಾಡಿ, ಒಂದಷ್ಟು ಸ್ಥಳಗಳನ್ನು ಚಿತ್ರೀಕರಿಸಿಕೊಂಡು ಬಂದೆವು. ಅಲ್ಲಿ ಒಮ್ಮೆ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡ್ತಿರ್ಬೇಕಾದ್ರೆ, ತುಸು ದೂರದಲ್ಲಿ ಯಾರೋ ಒಂದಿಷ್ಟು ಪ್ರೊಟೆಸ್ಟ್ ಮಾಡುತ್ತಿದ್ದರು. ಆಗೆಲ್ಲಾ, ಕಶ್ಮೀರದಲ್ಲಿ ಅದೇನೋ ಪ್ರೊಟೆಸ್ಟ್ ಆಗ್ತಿದೆ ಅಂದ್ರೆ, ನಮ್ಮ ತಲೆಯಲ್ಲಿ ಟೆರರಿಸಮ್ ಚಿತ್ರಗಳೇ ಓಡುತ್ತಿತ್ತು. ನಮಗೆ ಕ್ಯಾಮರಾದಲ್ಲಿ ಏನಾದರೂ ಸಿಗಬಹುದೇನೋ ಎನ್ನುವ ಆಸೆಯಲ್ಲಿ ಸಮೀಪಕ್ಕೆ ಹೋದೆವು. ನಮ್ಮ ಕೈಯಲ್ಲಿ ಕ್ಯಾಮರಾ ಹಿಡಿದುಕೊಂಡಿರೋದನ್ನು ಕಂಡು, ಅಲ್ಲಿ ಸೇರಿದ್ದ ಮೂವತ್ತು ಜನ ನಮ್ಮ ಸುತ್ತ ಸೇರಿದ್ರು. ನೀವು ನಮ್ಮ ಅಹವಾಲನ್ನು ಸರಕಾರಕ್ಕೆ ತಿಳಿಸಬೇಕು ಎಂದೆಲ್ಲಾ ಹೇಳೋಕೆ ಶುರು ಮಾಡಿದ್ರು. ನಮಗೋ ವಿಚಿತ್ರ ಪರಿಸ್ಥಿತಿ. ನಾವೇನೂ ಟಿ.ವಿಯವರಲ್ಲ. ಆದರೆ, ಅವರಿಗೆ ನಾವು ಟಿ.ವಿಯವರಂತೆಯೇ ಕಂಡಿದ್ದೆವು. ಒಟ್ಟು ಗೊಂದಲ-ತಮಾಷೆ ಮುಗಿಯೋಕೆ ಅರ್ಧ ಗಂಟೆ ಬೇಕಾಯ್ತು. ಅಲ್ಲಿಂದ ತಪ್ಪಿಸಿಕೊಂಡು ಬಂದ ಮೇಲೆ ಅಲ್ಲಿ ಪ್ರೊಟೆಸ್ಟ್ ನಡೀತಿದ್ದಿದ್ದು ಯಾವುದಕ್ಕೆ ಅಂತ ವಿಚಾರಿಸಿದ್ರೆ, ಅದ್ಯಾವುದೋ ಐತಿಹಾಸಿಕ ಕಟ್ಟಡವನ್ನು ಟ್ಯುಲಿಪ್ ಗಾರ್ಡನ್ ಮಾಡಬೇಡಿ ಅಂತ ಮುಷ್ಕರ ನಡೆದಿತ್ತು! ನಮ್ಮೂರಲ್ಲಿ ನಡೆಯುವಂಥಾ ಮಾಮೂಲು ಘಟನೆ ಅಷ್ಟೆ! ನಾನು ಸಂಬಂಧ ಇಲ್ಲದಿರೋ ಜಾಗದಲ್ಲಿ ಬಕ್ರಾ ಆಗಿದ್ದೆ ಅಷ್ಟೆ! ಅಲ್ಲಿ ಸಿಕ್ಕಿ ಹಾಕಿಕೊಂಡು ನಾನು ಒದ್ದಾಡ್ತಿದ್ದಿದ್ದನ್ನು ನನ್ನ ಟೀಮ್ ಚಿತ್ರೀಕರಿಸಿಕೊಂಡಿತ್ತು. ಅವರು ನನ್ನ ಅವಸ್ಥೆಗೆ ಬಿದ್ದೂ ಬಿದ್ದೂ ನಗುತ್ತಿದ್ದರೆ, ಕ್ಯಾಮರಾ ಮತ್ತೆ ಅದರ ಶಕ್ತಿಯ ಬಗ್ಗೆ ನಾನು ಅಚ್ಚರಿಪಟ್ಟಿದ್ದೆ.
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments