ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎರಡು ಅಕ್ಕ-ಪಕ್ಕದ ಊರಿನ ವೈಷಮ್ಯ ‘ಕಾಡು’ ಸಿನಿಮಾದ ಕಥಾವಸ್ತು. ಒಂದು ಊರಿನ ಹೆಸರು ಹೊಸೂರು, ಮತ್ತೊಂದು ಊರಿನ ಹೆಸರು ಕೊಪ್ಪಲು. ಈ ಕಥೆಯಲ್ಲಿ ಕಾಮ ಮತ್ತು ಪ್ರೇಮ, ಪ್ರೀತಿ ಮತ್ತು ದ್ವೇಷ ಎಂಬ ಅನೇಕ ತರಹದ ದ್ವಂದ್ವ, ವೈರುಧ್ಯಗಳನ್ನು ಕಾರ್ನಾಡರು ಕಟ್ಟಿಕೊಡುತ್ತಾರೆ. ಇಬ್ಬರು ವ್ಯಕ್ತಿಗಳ ಅಹಂಕಾರವು ಸಮುದಾಯದ ಸಮಸ್ಯೆಯಾಗಿ ಚಿತ್ರದಲ್ಲಿ ಬದಲಾಗುತ್ತಿರುತ್ತದೆ.

ಸಿನಿಮಾದಲ್ಲಿ ಕಾಮಕ್ಕಾಗಿ ಹಾತೊರೆಯುತ್ತಿರುವ ಕಲ್ಯಾಣಿ ಮತ್ತು ಪ್ರೇಮಕ್ಕಾಗಿ ಹಾತೊರೆಯುವ ಕಮಲಿ ಎಂಬ ಇಬ್ಬರು ಪಾತ್ರಧಾರಿಗಳಿದ್ದಾರೆ. ಪ್ರೀತಿಗಾಗಿ ಹಂಬಲಿಸುವ ಹೆಣ್ಣುಜೀವಗಳ ಜೊತೆಗೆ ದ್ವೇಷಕ್ಕಾಗಿ ಹಂಬಲಿಸುವ ಗಂಡುಜೀವಗಳಿವೆ. ಇದರ ಮಧ್ಯೆ ಕಿಟ್ಟಿ ಮತ್ತು ನಾಗಿ ಎಂಬ ಮಕ್ಕಳಿದ್ದಾರೆ. ಇವರಿಬ್ಬರೂ ತಮ್ಮದೇ ಲೋಕ ಕಟ್ಟಿಕೊಳ್ಳುತ್ತಾ, ತಮ್ಮ ಬದುಕಿನ ಆನಂದವನ್ನು ಹಾಗೂ ಹುಡುಕಾಟವನ್ನು ಕಂಡುಕೊಳ್ಳುತ್ತಿರುತ್ತಾರೆ. ಸಂವಿಧಾನದ ದೃಷ್ಟಿಯಲ್ಲಿ ಬಹಳ ಆಕರ್ಷಕವಾಗಿರುವ ಈ ಚಿತ್ರದ ದೊಡ್ಡವರ ಪ್ರಪಂಚದಲ್ಲಿ ಮನುಷ್ಯರು ಕುಬ್ಜರಾಗಿರುತ್ತಾರೆ. ಕಥೆ ಬೆಳೆಯುತ್ತಿದ್ದಂತೆ ಮಕ್ಕಳಾದ ನಾಗಿ ಮತ್ತು ಕಿಟ್ಟಿ ಪ್ರವರ್ಧಮಾನಕ್ಕೆ ಬರುತ್ತಾರೆ.

ಕೃಷ್ಣ ಅವರ ಕಾಡು ಕಾದಂಬರಿಯನ್ನಾಧರಿಸಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಡು ಕಾದಂಬರಿಯಲ್ಲಿ, ಒಟ್ಟು ಕಥೆಯನ್ನು ಕಿಟ್ಟಿಯ ಪಾತ್ರದ ಮೂಲಕ ಗ್ರಹಿಸುತ್ತೇವೆ. ಅಂದರೆ ಉತ್ತಮ ಪುರುಷನ ನಿರೂಪಣೆ. ಕಾಡು ಚಿತ್ರದಲ್ಲಿ, ಕೇವಲ ಕಥೆಯಿಂದ ಮಾತ್ರ ಸಿನಿಮಾ ಉತ್ತಮವಾಯಿತೇ? ಅಥವಾ ಬೇರೆ ಮಗ್ಗಲುಗಳಿವೆಯೇ? ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ.

ಕಾರ್ನಾಡರು ಒಂದು ಸಂದರ್ಶನಲ್ಲಿ “ಕಾಡು ಸಿನಿಮಾ ಒಂದು ಗ್ರಾಮ ಸಮೂಹದ ವಿಘಟನೆ ಕುರಿತಾದ ಕಥೆ” ಎಂದು ಹೇಳುತ್ತಾರೆ. ಈ ಸಿನಿಮಾದಲ್ಲಿ ಅಕ್ಕಪಕ್ಕದ ಊರಿನವರ ಅಹಂನಿಂದಾಗಿ ಗ್ರಾಮ ಸಮುದಾಯಗಳು ವಿಘಟನೆ ಮತ್ತು ಛಿದ್ರವಾಗುತ್ತಿರುತ್ತವೆ. ಈ ಎರಡೂ ಊರಿನ ಸಾಮಾನ್ಯ ಜನರಿಗೆ ಯಾವ ದ್ವೇಷವೂ ಇರುವುದಿಲ್ಲ. ಆದರೆ ಊರಿನ ಗೌಡರು ಪರಸ್ಪರ ದ್ವೇಷ ಸಾಧಿಸುತ್ತಿರುತ್ತಾರೆ. ಇಬ್ಬರು ಗೌಡರ ಅಹಂಕಾರದಿಂದ ಊರಿನವರು ಹೊಡೆದಾಡುತ್ತಾರೆ. ಈ ರೀತಿಯ ಗ್ರಾಮ ಸಮುದಾಯ, ಹೇಗೆ ವಿಘಟನೆಯ ಹಾದಿಯನ್ನು ತುಳಿಯುತ್ತದೆ ಎನ್ನುವುದನ್ನು ಕಥೆಯಲ್ಲಿ ಹೆಣೆಯಲಾಗಿದೆ. ಆದರೆ ಇದು ಕೇವಲ ಕಥೆಯಲ್ಲ, ವ್ಯವಸ್ಥೆಯ ಒಳನೋಟ.

ನಾವು ಕಥೆ ಅಥವಾ ಸಿನಿಮಾವನ್ನು ವಿಶ್ಲೇಷಣೆ ಮಾಡಬೇಕಾದರೆ ಮತ್ತು ಪ್ರಾಮುಖ್ಯತೆಯನ್ನು ಅಳೆಯುವಾಗ ಚಿತ್ರವನ್ನು ಶೂನ್ಯದಲ್ಲಿಟ್ಟು ನೋಡುತ್ತಿರುತ್ತೇವೆ. ಹೀಗೆ ನೋಡುವಾಗಲೂ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಏಕೆಂದರೆ ಸಿನಿಮಾ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಒಂದು ಸಮುದಾಯ ಹಾಗೂ ಸಮಾಜದ ಇರುವಿಕೆಯ ವ್ಯಾಖ್ಯಾನವಾಗಿರುತ್ತದೆ. ಕಾಡು ಸಿನಿಮಾದಲ್ಲಿ ಎರಡು ರೀತಿಯ ಪರಂಪರೆಯನ್ನು ನೋಡಬಹುದು. ಒಂದು ಆ ಸಮುದಾಯದ ಪರಂಪರೆ, ಇನ್ನೊಂದು ಸಿನಿಮಾ ಮಾಧ್ಯಮದ ಪರಂಪರೆ.

ಹೀಗಾಗಿ ಕಾಡು ಸಿನಿಮಾವನ್ನು “ಗ್ರಾಮ ಸಮುದಾಯದ ವಿಘಟನೆ’’ ಎಂಬ ಕಾರ್ನಾಡರ ಹೇಳಿಕೆ ಮೂಲಕ ಅರ್ಥಮಾಡಿಕೊಳ್ಳಬಹುದು. ಇವರ ಸಂಸ್ಕಾರ ಮತ್ತು ವಂಶವೃಕ್ಷ ಸಿನಿಮಾಗಳು ಕೂಡ ವಿಘಟನೆಗೆ ಸಂಬಂಧಪಟ್ಟಿದೆ. ಸಂಸ್ಕಾರ ಒಬ್ಬ ವ್ಯಕ್ತಿಯ ವಿಘಟನೆಯನ್ನು ಹೇಳುತ್ತದೆ. ಅಂದರೆ ಪ್ರಾಣೇಶಚಾರ್ಯರು ನಾರಾಣಪ್ಪನ ಪ್ರತಿರೋಧವನ್ನು ಎದುರಿಸುತ್ತಾ, ವಿಘಟನೆಯಾಗುವುದು. ಅಂತೆಯೇ ವಂಶವೃಕ್ಷ ಸಿನಿಮಾದಲ್ಲಿ ಕುಟುಂಬದ ವಿಘಟನೆಯನ್ನು ವಿವರಿಸುವುದಾಗಿದೆ. ನಿಧಾನಕ್ಕೆ ಆ ಕುಟುಂಬದ Monolithic Structure ಛಿದ್ರ ಛಿದ್ರವಾಗುತ್ತದೆ. ಇದನ್ನು ಕುಟುಂಬ ವಿಘಟನೆ ಎನ್ನಬಹುದು. ಆದರೆ ಕಾಡು ಸಿನಿಮಾ ಗ್ರಾಮ ಸಮುದಾಯದ ವಿಘಟನೆಯ ಕಥೆಯಾಗಿದೆ. ಹೀಗಾಗಿ ಈ ಮೂರು ಸಿನಿಮಾಗಳನ್ನು ಒಟ್ಟಿಗೆ ನೋಡಿದಾಗ ನಮಗೆ ಬೇರೆಯೇ ಅರ್ಥ ಕಾಣುತ್ತದೆ.

ಮೂರು ರೀತಿಯ ಪೇಟಿಂಗ್ ಗಳಿದ್ದರೆ ಅದನ್ನು ತ್ರಿವಳಿ ಎಂದು ಕರೆಯುವುದಿಲ್ಲ. ಅವುಗಳನ್ನು ತ್ರಿಪಲಕ ಅಥವಾ Triptych ಎನ್ನುತ್ತೇವೆ.  ಇವು ಮೂರಕ್ಕೂ ವೈಯಕ್ತಿಕವಾದ ಐಡೆಂಟಿಟಿಗಳಿರುತ್ತವೆ.  ಆದರೆ ಈ ಮೂರನ್ನು ಒಟ್ಟಿಗೆ ಜೋಡಿಸಿದಾಗ ಒಂದಕ್ಕೊಂದು ಅಂತರ್ಸಂಬಂಧ ಇರುವುದು ಗಮನಕ್ಕೆ ಬರುತ್ತದೆ. ಕಾಡು ಸಿನಿಮಾವನ್ನು ಈ ರೀತಿಯಲ್ಲಿ ಅರ್ಥ ಮಾಡಿಕೊಂಡಾಗ,  ಈ ಮೂರು ಸಿನಿಮಾಗಳ ಮೂಲಕ (ಸಂಸ್ಕಾರ, ವಂಶವೃಕ್ಷ, ಕಾಡು) ವಿಘಟನೆಯನ್ನು ಕಾಣಬಹುದು. ವಿಘಟನೆ ಎಂಬುದು ಸಿನಿಮಾದ ಧ್ವನಿ.

ಕಥೆಯ ಆಶಯ ಮತ್ತು ಕಥಾನಕ ಹೇಗೆ ಹುಟ್ಟುತ್ತದೆ ಎಂದು ಯೋಚಿಸಿದಾಗ, ಕಥೆಯ ಧಾತುವಿನಿಂದ ಶೈಲಿ ಮತ್ತು ಸತ್ವ ಹುಟ್ಟುತ್ತದೆ. ಕಾಡು ಚಿತ್ರದ ಮೂಲ ಧಾತುವೇ ಈ ಘರ್ಷಣೆ, ತಿಕ್ಕಾಟ ಮತ್ತು ಸಂಘರ್ಷ. ಇವುಗಳು ಜಾತಿ ಮತ್ತು ಸಂಸ್ಕೃತಿಯ ನೆಲೆಯಲ್ಲಿ ಏರ್ಪಡದೇ, ವ್ಯಕ್ತಿಯ ನೆಲೆಯಲ್ಲಿ ಸೃಷ್ಟಿಯಾಗುತ್ತದೆ. ಹೀಗಾಗಿ ಇದು ಯಾವ ರೀತಿಯ ಕಟ್ಟುವ ಕ್ರಮವೆಂದು ಪ್ರಶ್ನಿಸಿಕೊಂಡಾಗ, ಸಿನಿಮಾದ ಮೂಲ ಧಾತು ಘರ್ಷಣೆ ಆಗಿರುವುದರಿಂದ, ಕಟ್ಟುವ ಕ್ರಮದಲ್ಲಿ ನಾಟಕೀಯ ರಚನೆಯನ್ನು ಬಳಸಲಾಗುತ್ತದೆ.

ಕಾಡು ಸಿನಿಮಾ ಗಮನಿಸಿದಾಗ ತಿಕ್ಕಾಟವೇ ಹೆಚ್ಚು ಕಾಣುತ್ತದೆ. ಆರಂಭದಲ್ಲಿ ಒಂದು ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗುತ್ತದೆ. ಇದನ್ನೆ ನೆಪವಿಟ್ಟುಕೊಂಡು, ಮುಖ್ಯ ಗೌಡನ ವೈಯಕ್ತಿಕ ವಿಚಾರಗಳೆಲ್ಲವೂ ಮುನ್ನೆಲೆಗೆ ಬರುತ್ತದೆ. ಇಲ್ಲಿ ಹುಟ್ಟುಕೊಂಡ ವೈಷಮ್ಯ, ಕೊನೆಗೆ ಗ್ರಾಮ ಸಮುದಾಯಗಳ ಘರ್ಷಣೆಯಾಗಿ ಬೆಳೆಯುತ್ತದೆ. ಅಂದರೆ ವ್ಯಕ್ತಿಯ ಅಹಂ, ಹೇಗೆ ಸಮುದಾಯದ ಘರ್ಷಣೆಗೆ ಕಾರಣವಾಗುತ್ತದೆ ಎಂಬುದು ವೀಕ್ಷಕನಿಗೆ ತಿಳಿಯುತ್ತದೆ.

ಸಾಮಾನ್ಯವಾಗಿ ಘರ್ಷಣೆಯ ನೆಲೆಗಳು ಯಾವುವು ಎಂಬುದನ್ನು ಗುರುತಿಸಿಕೊಂಡು, ಸಿನಿಮಾದ ಗತಿಯನ್ನು ಅದಕ್ಕೆ ಪೂರಕವಾಗಿ ಕಟ್ಟಲಾಗುತ್ತದೆ. ಇದರಿಂದ ಮತ್ತಷ್ಟು ನಾಟಕೀಯವಾಗಿ ಸಿನಿಮಾ ಕಾಣುವುದು. ತ್ವರಿತವಲ್ಲದ ಸಂಕಲನ, ಕಾಡು ಸಿನಿಮಾ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಇಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ನಡುವಿನ ಸಂಬಂಧದ ಮೂಲಕ ಕಥೆ ಕಟ್ಟುವುದಿಲ್ಲ. ಸಂಕಲನದ ವಿಳಂಬದಿಂದ ಉಂಟಾಗುವ ನಿಶ್ಯಬ್ದದಿಂದ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬಹುದು. ಈ ರೀತಿಯ ಕಟ್ಟುವ ಕ್ರಿಯೆ ಸಿನಿಮಾದಲ್ಲಿ ಬಹಳ ಸುಂದರವಾಗಿ ಕಾಣುತ್ತದೆ.

ಈ ಸಿನಿಮಾದಲ್ಲಿ ಪ್ರೀತಿ ಇಲ್ಲದ ಕಾಮವಿದೆ. ತಾರ್ಕಿಕವಲ್ಲದ ದ್ವೇಷ ಇದೆ ಎಂಬುದು ಅರ್ಥವಾಗುತ್ತದೆ. ತ್ವರಿತ ಗತಿಯನ್ನು ಬಿಟ್ಟು ವಿಳಂಬ ಗತಿಯನ್ನು ಇಟ್ಟುಕೊಳ್ಳುವುದರಿಂದ ಪ್ರತಿ ಘಟನೆಯೊಂದಿಗೆ ಜೀವಿಸುತ್ತಿರುತ್ತೇವೆ. ಇದು, ಸಿನಿಮಾ ಕಟ್ಟುವ ಒಂದು ಸುಂದರ ಕ್ರಮ. ಕಾಡು ಸಿನಿಮಾದಲ್ಲಿ ಬಿ.ವಿ ಕಾರಂತರು ವಿಶಿಷ್ಟವಾದ ಸಂಗೀತವನ್ನು ಪ್ರಯೋಗಿಸಿದ್ದಾರೆ. ಮುಂದುವರಿಕೆಯಾಗಿ ಚೋಮನದುಡಿಯಲ್ಲಿಯೂ ಇದೇ ಮಾದರಿಯ ಸಂಗೀತವನ್ನು ಅದ್ಭುತವಾಗಿಸಿದ್ದಾರೆ. ಕರ್ಣಾನಂದಕರವಾದ, ಸುಮಧುರವಾದ ಸಂಗೀತವೇ ಅತ್ಯುತ್ತಮವಾಗಿರುತ್ತವೆ ಎಂಬ ನಂಬಿಕೆ ಚಿತ್ರರಂಗದಲ್ಲಿದ್ದವು. ಆದರೆ ಆ ಮಾದರಿಯ ಸಂಗೀತಗಳೆಲ್ಲಾ ಎಂದಿಗೂ ಕಥೆಯ ಆತ್ಮದಿಂದ ಹುಟ್ಟುತ್ತಿರಲಿಲ್ಲ. ಕೇಳಲು ಅಪ್ಯಾಯಮಾನವಾಗಿರುವ, ಕಥೆಯ ನಾಟಕೀಯತೆಯನ್ನು ಹೆಚ್ಚಿಸುವುದನ್ನೇ ಹೆಚ್ಚಿನವರು ಸಿನಿಮಾ ಸಂಗೀತವಾಗಿ ಬಳಸುತ್ತಿದ್ದರು. ಆದರೆ ಈ ತರಹದ ಪ್ರಕ್ರಿಯೆ ಸಿನಿಮಾದ ಉದ್ದೇಶವಾಗಿರಬಾರದು.

ಯಾವಾಗಲೂ ಸಂಗೀತವೂ ಕೂಡ ಸಿನಿಮಾ ಚಿತ್ರಿಸುವ ಸಮುದಾಯದ ಒಂದು ಭಾಗವಾಗಿ ಹೊರಹೊಮ್ಮಬೇಕು. ಈ ರೀತಿಯ ಕ್ರಮವನ್ನು ಕಾರಂತರು ಕಾಡು ಚಿತ್ರದಲ್ಲಿ ಬಹಳ ಅದ್ಭುತವಾಗಿ ಬಳಸಿದ್ದಾರೆ. ಗ್ರಾಮ ಸಮುದಾಯಗಳು ಉಪಯೋಗಿಸುತ್ತಿದ್ದ ವಾದ್ಯಗಳನ್ನೇ ಬಳಸಿಕೊಂಡು ಸಿನಿಮಾ ಕಟ್ಟಿರುವುದು ಮಾತ್ರ ಆಶ್ಚರ್ಯಕರ! ಕಾರಂತರು ಕಾಡು ಸಿನಿಮಾದ ಮುಂದುವರೆದ ಭಾಗವೆಂಬಂತೆ ಚೋಮನದುಡಿಯಲ್ಲೂ ಇದೇ ಮಾದರಿಯ ಸಂಗೀತವನ್ನು ಸೃಷ್ಟಿಸಿದ್ದರು.  

ಕಾಡು ಚಿತ್ರದಲ್ಲಿ ಕಥೆಯ ಜೊತೆಗೆ ಕಥಾನಕವೂ ಪ್ರಾಮುಖ್ಯತೆ ಪಡೆದಿದೆ. ತಂತ್ರಗಳ ಬಳಕೆ ಕೂಡ ಕಥಾನಕಕ್ಕೆ ಪೂರಕವಾಗಿ ಮೂಡಿಬಂದಿದೆ. ಈ ಎಲ್ಲಾ ಕಾರಣದಿಂದ ಕಾಡು ಸಿನಿಮಾ ಬಹಳ ಮುಖ್ಯವಾಗಿ ಕಾಣುತ್ತದೆ.

-ಗಿರೀಶ್ ಕಾಸರವಳ್ಳಿ

1 Comment

  1. ಅಶೋಕವರ್ಧನ ಜಿ.ಎನ್

    ಮೂರು ಚಿತ್ರಗಳ (ತ್ರಿಫಲಕ) ಎಳೆ – ವ್ಯಕ್ತಿ (ಸಂಸ್ಕಾರ), ಕುಟುಂಬ (ವಂಶವೃಕ್ಷ) ಮತ್ತು ಸಮುದಾಯಗಳ (ಕಾಡು) ವಿಘಟನೆ, ಹಿಡಿದು ಹೇಳಿದ ಮಾತಿನ ಮುಂದುವರಿಕೆಯಾಗಿ ಇಂದಿನ ರಾಜ್ಯ ಹಾಗೂ ದೇಶದ ವಿಭಜನಾ ಸ್ಥಿತಿ ನೆನಪಾಗಿ ನನಗೆ ಕಳವಳ ವಾಸ್ತವದ ಅನುಭವವಾಯ್ತು.

    Reply

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more